ಶತಮಾನ ಕಂಡ

ಹಿಂದು ವಿದ್ಯಾದಾಯಿನೀ ಸಂಘ (ರಿ.) , ಸುರತ್ಕಲ್

1916  –  2016

ಶತಮಾನಗಳ ಹಿಂದೆ ಸುರತ್ಕಲ್ ಪ್ರದೇಶವು ಒಂದು ಗುಡ್ಡ ಪ್ರದೇಶವಾಗಿತ್ತು. ಸುತ್ತಮುತ್ತ ಹೊಸಬೆಟ್ಟು, ಮೈರ್ಪಾಡಿ, ಕಟ್ಲ, ಅಯ್ಯಕೆರೆ, ಗುಡ್ಡೆಕೊಪ್ಲ, ಕಲ್ಯಾಣಿಪಡ್ಪು ಹಾಗೂ ಇನ್ನಿತರ ಪ್ರಾದೇಶಿಕ ಸ್ಥಳಗಳು ಇದ್ದವು. ಎತ್ತಿನ ಗಾಡಿಯಷ್ಟೇ ಹೋಗುವ ದಾರಿಯು ಉಪ್ಪಜೆಯಿಂದ ಕೆಳಭಾಗದಲ್ಲಿ ಗುಡ್ಡೆಕೊಪ್ಲವಾಗಿ ಸುರತ್ಕಲ್ ದೇವಾಲಯದತ್ತ ಪಡುಕರೆಯಲ್ಲಿ ಸಾಗುತ್ತಿತ್ತು. ಸುತ್ತಮುತ್ತ ತೆಂಗು, ಕಂಗು, ಬತ್ತದ ಗದ್ದೆಗಳು, ಸಮೀಪದಲ್ಲೇ ಭೋರ್ಗರೆಯುವ ಸಮುದ್ರ. ದಾರಿ ದೀಪವಾಗಿ ಅಲ್ಲಲ್ಲಿ ಚಿಮಣಿ ಲಾಟೀನ್‍ಗಳನ್ನು, ಕುದುರೆಗಾಡಿ ದೀಪಗಳನ್ನು ನೇತಾಡಿಸುವ ಕಾಲವದು. ಮುಂಜಾವದ ಹೊತ್ತು ಗೆಜ್ಜೆ ಶಬ್ದದೊಂದಿಗೆ ದಂಡಧಾರಿ ಅಂಚೆ ಜವಾನ ಈ ಮಾರ್ಗದಲ್ಲಿ ನಡೆದು ಹೋದನೆಂದರೆ ಬೆಳಗ್ಗಿನ 5 ಗಂಟೆಯ ಸಮಯವೆಂದು ಭಾವಿಸುತ್ತಿದ್ದ ಕಾಲ. ಕೃಷಿಯೇ ಪ್ರಧಾನವಾಗಿ ಶ್ರಮ ಜೀವನವನ್ನು ನಡೆಸುತ್ತಿದ್ದವರಲ್ಲಿ ಕೆಲವೇ ಮಂದಿ ಶ್ರೀಮಂತ ಜಮೀನ್ದಾರರು. ಒಪ್ಪೊತ್ತು ಊಟಕ್ಕೂ ಕಷ್ಟಪಡುತ್ತಿದ್ದ ಜನ ದೂರದ ಬೊಂಬಾಯಿಗೋ, ಮದರಾಸಿಗೋ, ಕೇರಳಕ್ಕೋ ಹೋಗಿ ಹೋಟೆಲ್, ದೇವಸ್ಥಾನದ ಪರಿಚಾರಿಕೆ, ಪಾನ್ ಅಂಗಡಿ, ಸಣ್ಣ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಬೆರಳೆಣಿಕೆಯಷ್ಟು ಮಂದಿ ವಿದ್ಯಾಭ್ಯಾಸಕ್ಕಾಗಿ ಹೊರ ಸ್ಥಳಗಳಿಗೆ ಹೋಗುತ್ತಿದ್ದರು. ಇದು 1900ರ ಕಾಲದ ಕಥೆ.  ಅನಂತರ ಉಪ್ಪಜೆಯಿಂದ ರಸ್ತೆ ಪೂರ್ವಕ್ಕೆ ಸರಿದು ಸಂತೆಕಟ್ಟೆ ಯಾ ತೊರ್ತಾಲ್ (ಸುರತ್ಕಲ್ ಜಂಕ್ಷನ್ ಗೆ ಇನ್ನೊಂದು ಹೆಸರು) ಯಾಗಿ ಪಾವಂಜೆಯತ್ತ ಸಾಗಿತು.  ಈಗ NH 66 ನ ಚತುಷ್ಪಥ ರಸ್ತೆ ಸುರತ್ಕಲ್ ಮಧ್ಯೆ ಹಾದು ಹೋಗುತ್ತಿದೆ.  ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಆಲದ ಮರ, ಮಾವಿನ ಮರ, ಹಲಸಿನ ಮರ, ಅಶ್ವತ್ಥ ಮರಗಳಿದ್ದ ಹಳೆಯ ನೆನಪುಗಳಿಂದ ಸುರತ್ಕಲ್ಲಿಗೆ ಬಂದಿಳಿದರೆ, ಒಂದರೆನಿಮಿಷ ಆವಾಕ್ಕಾಗಬಹುದು.  ಈ ಮಧ್ಯೆ ವಿದ್ಯಾದಾಯಿನಿಯೂ ಬೆಳೆದು ನಿಂತಿದೆ. ಹೀಗಿರುವಲ್ಲಿ ಮಾಸ್ತರಿಕೆಯೋ, ಗುಮಾಸ್ತಗಿರಿಯೋ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ  ಊರಿನ ಕೆಲವು ಸಮಾನ ಮನಸ್ಸಿಗರು ಕೆಲವು ಕಾರಣಗಳಿಂದ ಒಟ್ಟಾಗಿ 1914-15ರ ಸಮಯದಲ್ಲಿ ಹಿಂದು ಪಠಣ ಸಮಾಜ (Hindu Reading Club) ಎಂಬ ವಾಚನಾಲಯ ತೆರೆದು ಭಜನೆ, ಭಾಷಣ, ಹರಿಕಥೆಗಳಂತಹ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ನವಜಾಗೃತಿಯನ್ನು ಮೆರೆದರು. Sತತ್ಫಲವಾಗಿ 30-11-1916ರಂದು ಮುಂಜಾವ 4.06ರ ಸಮಯದಲ್ಲಿ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದಲ್ಲಿ ಹಿಂದು ವಿದ್ಯಾದಾಯಿನೀ ಸಂಘ ಮತ್ತು ಇಡ್ಯ ವಿದ್ಯಾದಾಯಿನೀ ಶಾಲೆಯು ಶ್ರೀ ಮೈರ್ಪಾಡಿ ವೆಂಕಟ್ರಮಣಯ್ಯ ಮತ್ತು ಶ್ರೀ ಉಪ್ಪಜೆ ಶ್ರೀ ವೆಂಕಟ್ರಮಣಯ್ಯನವರ ದಿಕ್ಸೂಚಿಯಲ್ಲಿ ಪ್ರಾರಂಭವಾಯಿತು. ಆರ್ಥಿಕ ಮುಗ್ಗಟ್ಟು, ಹಾಗೂ ಇತರ ತೊಂದರೆಗಳಿದ್ದರೂ, ಧೃತಿಗೆಡದೆ, ಶಾಲೆಯನ್ನು ಮುನ್ನಡೆಸುತ್ತಾ, ಅಧ್ಯಾಪಕರೆಲ್ಲರೂ ಧರ್ಮಾರ್ಥವಾಗಿ ಕೆಲಸ ಮಾಡುತ್ತಿದ್ದುದು ಅಂದಿನ ವಿಶೇಷ. ಆರಂಭದ ಸಂಘದ ಅಧ್ಯಕ್ಷರು ಶ್ರೀ ಇಡ್ಯಾ ಕೃಷ್ಣಯ್ಯನವರು ಅವರೊಂದಿಗೆ ಛಾತ್ರಮನೆ ಶ್ರೀ ಪಿ. ಶಾಮ ರಾವ್‍ರವರು, ಹೊಸಬೆಟ್ಟು ಪಡ್ಲಾಗಿ ಮಠದ ರಾಮರಾಯರೂ ಸೇರಿಕೊಂಡರು. ಹೀಗೆ ಊರಿನ ಗಣ್ಯರಿಂದ, ಆಸಕ್ತರಿಂದ ಪಯಣವೆಸಗಿದ ಸಂಘ ಮತ್ತು ಶಾಲೆ ಇಂದು ಶತಮಾನೋತ್ಸವವನ್ನು ಆಚರಿಸುತ್ತಿರುವುದು ಮಹದಾನಂದದ ವಿಷಯ.

ಆಮೆ ನಡಿಗೆಯ ದೂರದರ್ಶಿತ್ವ

ಇತರೆಲ್ಲಾ ಶಿಕ್ಷಣ ಸಂಸ್ಥೆ ಗಳಂತೆ ದಾಪುಗಾಲಿನಲ್ಲಿ ಸಾಗದೆ ನಿಧಾನ ಗತಿಯಿಂದ ಪುಟ್ಟ ಪುಟ್ಟ ಹೆಜ್ಜೆಗಳೊಂದಿಗೆ ಕಾಲಿರಿಸುತ್ತಾ 1937ರಲ್ಲಿ ಪಕ್ಕದ ಕುಳಾಯಿಯಲ್ಲಿದ್ದ ಮೈರ್ಪಾಡಿ ಶ್ರೀವೆಂಕಟ್ರಮಣ ಶಾಲೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

1925ರಲ್ಲಿ ಇಡ್ಯ ಗ್ರಾಮದ ಗುಡ್ಡೆಕೊಪ್ಲದಲ್ಲಿ ಶ್ರೀ ಭಾರತೀ ಶಾಲೆಯನ್ನು ತೆರೆದಿತ್ತಾದರೂ, ಮಕ್ಕಳ ಕೊರತೆಯಿಂದ 1933ರಲ್ಲಿ ಮುಚ್ಚಬೇಕಾಯಿತು.

ಮುಲ್ಕಿ – ಮಂಗಳೂರು ನಡುವೆ ಹೈಸ್ಕೂಲ್ ವಿದ್ಯಾಭ್ಯಾಸದ ಶಾಲೆಗಳಿಲ್ಲದಿರುವುದನ್ನು ಮನಗಂಡು ಪ್ರಯತ್ನಪಟ್ಟು 1944ರಲ್ಲಿ ವಿದ್ಯಾದಾಯಿನೀ ಹೈಸ್ಕೂಲನ್ನು ಪ್ರಾರಂಭಿಸಲಾಯಿತು. ಕರ್ನಾಟಕದ ಪ್ರಥಮ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಎಂ. ವಾಸುದೇವರಾಯರು ಪ್ರಾರಂಭದಿಂದಲೂ ಮುಖ್ಯೋಪಾಧ್ಯಾಯರಾಗಿ ವಿದ್ಯಾದಾಯಿನಿಗೆ ಕೀರ್ತಿಯನ್ನು ತಂದಿತ್ತರು. ವಿದ್ಯಾದಾಯಿನಿಯೆಂದರೆ ವಾಸುದೇವರಾಯರು, ವಾಸುದೇವರಾಯರೆಂದರೆ ವಿದ್ಯಾದಾಯಿನಿ ಯೆಂದೇ ಪ್ರಸಿದ್ಧವಾಗಿದ್ದ ಕಾಲವದು. ಪ್ರೈಮರಿ ಶಾಲೆಯಲ್ಲಿ 1920ರ ಕಾಲದಿಂದ ಹೆಡ್ ಮಾಸ್ಟರರಾಗಿದ್ದ ಶ್ರೀ ಯಚ್. ದಾಮೋದರರಾಯರು ವಿದ್ಯಾದಾಯಿನಿಯ ರೂವಾರಿ ಎಂದೇ ಪ್ರಸಿದ್ಧರು. ಇಡೀ ವಿದ್ಯಾದಾಯಿನೀ ಸಂಸ್ಥೆಗೆ ಬೇಕಾಗಬಹುದಾದ ಜಾಗಗಳನ್ನು ಸರಕಾರದಿಂದ, ಸ್ವಂತ ಉಳ್ಳವರಿಂದ ಪಡಕೊಳ್ಳುವಲ್ಲಿ ಪಟ್ಟ ಶ್ರಮಗಾಥೆ ರೋಚಕ, ಬಹುಮಾನ್ಯ. ನಮ್ಮ ಹಿರಿಯರೆಲ್ಲಾ ಮುಖ್ಯವಾಗಿ ಈ ಇಬ್ಬರನ್ನು ಆಗಾಗ ನೆನಪಿಸಿಕೊಳ್ಳುವುದನ್ನು ಕೇಳಿದ್ದೇವೆ.

1967ರಲ್ಲಿ ಕುತ್ತೆತ್ತೂರು ಸೀತಾರಾಮರಾಯರು ತಮ್ಮ ತಂದೆಯವರಾದ ಭಕ್ತ ಶ್ರೀ ಗೋವಿಂದ ದಾಸರ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಯ ದಾನವನ್ನಿತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್ಲ್‍ನಲ್ಲಿ ಆರಂಭವಾಗುವಂತೆ ಮಾಡಿದರು. ಹಿಂದೆಯೂ ಶ್ರೀ ಸೀತಾರಾಮರಾಯರು ವಿದ್ಯಾದಾಯಿನೀ ಹೈಸ್ಕೂಲಿನಲ್ಲಿ ರಾಮಕೃಷ್ಣ ಮಂದಿರದ ರಚನೆಗೂ ನೆರವಾಗಿದ್ದರು. ಗೋವಿಂದ ದಾಸ ಕಾಲೇಜಿನ ಸರ್ವಾಂಗೀಣ ಪ್ರಗತಿಯ ನೇತಾರ ಪ್ರಾಂಶುಪಾಲರಾದ ಶ್ರೀ ಯಚ್. ಗೋಪಾಲಕೃಷ್ಣರಾಯರು. B.A., B.Com., ಕೋರ್ಸ್‍ಗಳೊಂದಿಗೆ ಆರಂಭವಾದ ಗೋವಿಂದ ದಾಸ ಕಾಲೇಜಿನಲ್ಲಿ B.Sc., B.B.M., P.G.D.C.A., P.G.D.H.R.M., Computer Vocational Courseಗಳು ಸೇರ್ಪಡೆಗೊಂಡು ಇದೀಗ M.Com., ಮತ್ತು  M.Sc.,  (ರಸಾಯನ ಶಾಸ್ತ್ರ) ತರಗತಿಗಳು ಕೂಡಾ ಸುರತ್ಕಲ್ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ. KG ಯಿಂದ  PG   ವರೆಗೆ ಹೆಜ್ಜೆಗಳನ್ನಿಟ್ಟು ವಿದ್ಯಾ ದಾನವನ್ನು ಗೈಯುತ್ತಿರುವ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗೆ 1991ರಲ್ಲಿ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ ಹುಟ್ಟು ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿ ಕೊಂಡಿತು. ಇದೀಗ ಈ ಆಂಗ್ಲ ಮಾಧ್ಯಮ ಶಾಲೆಯು CBSE  ಪಠ್ಯಕ್ರಮಕ್ಕೂ ಸೇರ್ಪಡೆಗೊಂಡು ಹೊಸ ಅಧ್ಯಾಯದತ್ತ ಪಯಣ ಬೆಳೆಸಲಿದೆ. 2006ರಲ್ಲಿ ಸರಕಾರದ ನಿಯಮದಂತೆ ಗೋವಿಂದ ದಾಸ ಕಾಲೇಜಿನಲ್ಲಿದ್ದ ಪಿ.ಯು. ಕಾಲೇಜೆಂದು ಪ್ರತ್ಯೇಕಗೊಂಡಿದೆ. ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವ ಈ ಕಾಲೇಜು ಇಂದು ಭವ್ಯವಾದ ಕಟ್ಟಡ ಮತ್ತು ಅತ್ಯತ್ತಮ ಅಧ್ಯಾಪಕರಿಂದ  ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ.

2009ರಲ್ಲಿ ತನ್ನ ಹರವಿನಲ್ಲಿದ್ದ ಜಾಗದಲ್ಲಿ ಹಿಂದು ವಿದ್ಯಾದಾಯಿನೀ ಸಂಘವು ವಿದ್ಯಾದಾಯಿನೀ ಇನ್ಸ್‍ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಎಂಡ್ ರೂರಲ್ ಡೆವಲಪ್‍ಮೆಂಟ್ ಎಂಬ ಸಂಸ್ಥ್ಷೆಯನ್ನು ಪ್ರಾರಂಭಿಸಿ ಟೈಲರಿಂಗ್, ಕಂಪ್ಯೂಟರ್ ಟ್ರೈನಿಂಗ್, ವ್ಯವಸಾಯ ಪದ್ಧತಿಯ ವೃತ್ತಿಪರ ತರಗತಿ ಇತ್ಯಾದಿಗಳನ್ನು ನಡೆಸುತ್ತಿದೆ.